ಎಥಿಲೀನ್ ಡೈಬ್ರೋಮೈಡ್
	BrCH2-CH2Br. ಎಥಿಲೀನ್ ಬ್ರೋಮೈಡ್ ಎಂಬ ಹೆಸರೂ ಇದೆ.  ಎಥಿಲೀನ್ ಮತ್ತು ಬ್ರೋಮೀನುಗಳ ನೇರ ಸಂಯೋಗದಿಂದ ಇದನ್ನು ತಯಾರಿಸುತ್ತಾರೆ.  ಎಥಿಲಿನ್ ಅನಿಲವನ್ನೂ ಬ್ರೋಮಿನ್ ಆವಿಯನ್ನೂ ಬೆರೆಸಿ ಸೂಕ್ತವಾದ ವೇಗವರ್ಧಕಗಳ (ಕ್ಯಟಾಲಿಸ್ಟ್ಸ್) ಮೇಲೆ ಹಾಯಿಸಿ ಇದನ್ನು ತಯಾರಿಸುತ್ತಾರೆ. 

			C2H4+Br2→C2H4Br2

	ಸೂಕ್ತ ದ್ರಾವಕವನ್ನು ಉಪಯೋಗಿಸಿ ದ್ರಾವಣದಲ್ಲಿಯೂ ಈ ಕ್ರಿಯೆ ನಡೆಯಬಹುದು. 

	ಎಥಿಲೀನ್ ಡೈಬ್ರೋಮೈಡ್ ಬಣ್ಣವಿಲ್ಲದ ದ್ರವ.  ಇದರ ಕುದಿಬಿಂದು 132ಲಿ ಸೆಂ. ಗ್ರೇ. ಔದ್ಯೋಗಿಕ ಕ್ಷೇತ್ರಗಳಲ್ಲಿ ಇದಕ್ಕೆ ಅನೇಕ ಉಪಯೋಗಗಳಿವೆ.  ಮೋಟಾರು ವಾಹನಗಳ ಎಂಜಿನ್ನುಗಳಲ್ಲಿ ಆಗುವ ಕುಕ್ಕಾಟವನ್ನು (ನಾಕಿಂಗ್) ತಪ್ಪಿಸಲು ಪೆಟ್ರೋಲಿಗೆ ಬೆರೆಸುವ ಈಥೈಲ್ ಪ್ಲೂಯ್ಡಿನಲ್ಲಿ 25% ಎಥಿಲೀನ್ ಡೈಬ್ರೋಮೈಡ್ ಇರುತ್ತದೆ.  ಅನೇಕ ಸಾವಯುವ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಎಥಿಲೇನ್ ಡೈಬ್ರೋಮೈಡ್ ಬಳಕೆಯಾಗುತ್ತದೆ.  ಆಹಾರ ಧಾನ್ಯಗಳ ಶೇಖರಣೆಯಲ್ಲಿ ಇದರ ಉಪಯೋಗವಿದೆ-ಧಾನ್ಯಗಳಿಗೆ ತಗಲುವ ಕೀಟಗಳ ನಿವಾರಣೆಗೆ ಧಾನ್ಯಗಳನ್ನೂ ಅವುಗಳನ್ನು ಶೇಖರಿಸಿಡುವ ಸ್ಥಳ, ಮೊದಲಾದವನ್ನೂ ಎಥಿಲೀನ್ ಡೈಬ್ರೋಮೈಡ್ ಆವಿಯಿಂದ ಸಂಸ್ಕರಿಸುತ್ತಾರೆ.  
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ